ಕೊಲೂಗೊ	
	
ಫಿಲಿಪೀನ್ಸ್, ಮಲಯ, ಜಾವ, ಸುಮಾತ್ರ, ಬೋರ್ನಿಯೊ ಹಾಗೂ ಬರ್ಮಗಳಲ್ಲಿ ಮಾತ್ರ ಕಂಡುಬರುವ ಒಂದು ವಿಚಿತ್ರ ಜಾತಿಯ ಸಸ್ಯಾಹಾರಿ ಸಸ್ತನಿ. ಇದರ ವೈಜ್ಞಾನಿಕ ನಾಮ ಸೈನೊಸಿಫ್ಯಾಲಸ್. ಮ್ಯಾಮೇಲಿಯ ವರ್ಗ, ಡರ್ಮಾಪ್ಟರ ಗಣ, ಸೈ£ೂಸಿಫ್ಯಾಲಿಡೀ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸೈ, ವೊಲಾನ್ಸ್ ಮತ್ತು ಸೈ.ವೇರಿಗೇಟಸ್ ಎಂಬ ಎರಡು ಪ್ರಭೇದಗಳಿವೆ. ಮೊದಲನೆಯದು ಫಿಲಿಪೀನ್ಸ್ ದ್ವೀಪಗಳಲ್ಲೂ ಎರಡನೆಯದು ಮೇಲೆ ಹೇಳಿದ ಇತರ ಪ್ರದೇಶಗಳಲ್ಲೂ ಕಂಡುಬರುತ್ತವೆ. ಇವೆರಡಕ್ಕೂ ಕೊಬೀಗೋ, ಕಾಗುವಾನ್, ಫ್ಲೈಯಿಂಗ್ ಲೀಮರ್ ಎಂಬ ಇತರ ಹೆಸರುಗಳೂ ಇವೆ. 			(ಎಸ್.ಎನ್.ಕೆಯು.)

ಕೊಲೂಗೊ ವೃಕ್ಷವಾಸಿ ವಿವಿಧ ಬಗೆಯ ಹಣ್ಣುಗಳು, ಮೊಗ್ಗುಗಳು, ಹೂಗಳು ಚಿಗುರು ಮುಂತಾದುವನ್ನು ತಿಂದು ಜೀವಿಸುತ್ತದೆ. ಮಳೆಯಲ್ಲಿ ನೆನೆದ ಎಲೆಗಳನ್ನು ನೆಕ್ಕಿ ನೀರನ್ನು ಒದಗಿಸಿಕೊಳ್ಳುತ್ತದೆ.

ಕೊಲೂಗೊ ತನ್ನ ರೂಪ, ಗಾತ್ರ ಮತ್ತು ನಡತೆಯಲ್ಲಿ ಹಾರುವ ಅಳಿಲನ್ನು ಹೋಲುತ್ತದೆ. ಮೂತಿ ಮಾತ್ರ ಲೀಮರಿನಲ್ಲಿರುವಂತಿದೆ. ಗಾತ್ರದಲ್ಲಿ ಅಳಿಲಿಗಿಂತ ಕೊಂಚ ದೊಡ್ಡದು(ದೇಹ ಮತ್ತು ತಲೆ ಇವೆರಡರ ಒಟ್ಟು  ಉದ್ದ ಸು.380-423 ಮಿಮೀ. ಬಾಲದ ಉದ್ದ 220-270ಮೀ) ದೇಹದ ಬಣ್ಣ ಗಂಡಿನಲ್ಲಿ ಕಂದು, ಹೆಣ್ಣಿನಲ್ಲಿ ಬೂದು,  ವೇರಿಗೇಟಸ್ ಪ್ರಭೇದದಲ್ಲಿ ದೇಹದ ಮೇಲೆ ಬಿಳಿಯ ಬಣ್ಣದ ಮಚ್ಚೆಗಳಿವೆ. ಇದರಿಂದಾಗಿ ಕೊಲೂಗೊ ಮರದಲ್ಲಿರುವಾಗ ಹಿನ್ನೆಲೆಯ ಬಣ್ಣದೊಂದಿಗೆ ಬಲು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕೊಲೂಗೊವಿನ ಅತಿ ವಿಶಿಷ್ಟವಾದ ಹಾಗೂ ಪ್ರಮುಖವಾದ ಲಕ್ಷಣ ಅದರ ಕೈಕಾಲು ಮತ್ತು ಬಾಲಗಳನ್ನೆಲ್ಲ ಒಳಗೊಂಡು, ದೇಹದ ಎರಡೂ ಪಕ್ಕಗಳಲ್ಲಿರುವ ರೆಕ್ಕೆ. ರೆಕ್ಕೆಯೆಂದರೆ ಹಕ್ಕಿಗಳಲ್ಲಾಗಲೀ ಬಾವಲಿಗಳಲ್ಲಾಗಲೀ ಇರುವಂಥದಲ್ಲ; ದೇಹದ ಪಾಶ್ರ್ವಗಳಲ್ಲಿನ ಚರ್ಮದ ಮಡಿಕೆ ಮಾತ್ರ. ಕೈಕಾಲುಗಳನ್ನು ಹರಡಿದಾಗ ಇದೂ ಸಹ ಹರಡಿಕೊಳ್ಳುತ್ತದೆ. ಇದರ ಸಹಾಯದಿಂದ ಕೊಲೂಗೊ ಒಂದು ಮರದಿಂದ ಇನ್ನೊಂದಕ್ಕೆ ಸಾಗಬಲ್ಲುದು. ಹೀಗೆ ಸಾಗುವಾಗ ರೆಕ್ಕೆಯನ್ನು ಪ್ಯಾರಾಚೂಟಿನಂತೆ ಅಗಲವಾಗಿ ಹರಡಿಕೊಂಡು ಗಾಳಿಯಲ್ಲಿ ನಿಧಾನವಾಗಿ ತೇಲುತ್ತದೆ. ಗಾಳಿ ಬೀಸದಿರುವಾಗಲೂ ಸುಮಾರು 68 ಮೀಟರುಗಳಷ್ಟು ದೂರವನ್ನು ಕ್ರಮಿಸಬಲ್ಲದು.

	ಈ ಬಗೆಯ ಚಲನೆಗೆ ಕೊಲೂಗೊ ಎಷ್ಟು ಚೆನ್ನಾಗಿ ಹೊಂದಿಕೊಂಡಿದೆಯೆಂದರೆ ಇದು ನೆಲದ ಮೇಲೆ ಬಹಳ ಕಷ್ಟಪಟ್ಟು ನಡೆಯಬಲ್ಲುದು ಮಾತ್ರ. ಆದರೆ ಮರದ ಮೇಲಿರುವಾಗ ಆಹಾರಕ್ಕಾಗಿ ತನ್ನ ಚೂಪಾದ ಉಗುರುಗಳ ಸಹಾಯದಿಂದ ಮೆಲ್ಲಗೆ ರೆಂಬೆಗಳನ್ನು ಹತ್ತುತ್ತದೆ. ಕೊಲೂಗೊವಿನ ಕೆಳದವಡೆಯ ಮುಂದಿನ ಹಲ್ಲುಗಳೂ ವಿಚಿತ್ರವಾಗಿದೆ. ಒಂದೊಂದು ಹಲ್ಲೂ 6-11 ಭಾಗಗಳಾಗಿ ಸೀಳುಗೊಂಡು ಬಾಚಣಿಗೆಯಂತೆ ಕಾಣುತ್ತದೆ. ಬಹುಶಃ ಎಲೆಗಳನ್ನು ತಿನ್ನಲು ಇದು ಉಪಯುಕ್ತ ಎಂದು ತೋರುತ್ತದೆ.

	ಕೊಲೂಗೊ ನಿಶಾಚರಿ. ರಾತ್ರಿಯ ಚಟುವಟಿಕೆಗೆ ಅನುಕೂಲವಾಗುವಂತೆ ಇದಕ್ಕೆ ಅಗಲವಾದ ಹಳದಿ ಬಣ್ಣದ ಕಣ್ಣುಗಳಿವೆ. ಹಗಲೆಲ್ಲ ಯಾವುದಾದರೂ ಸುರಕ್ಷಿತ ಸ್ಥಳದಲ್ಲಿ ಮರದ ರೆಂಬೆಯೊಂದಕ್ಕೆ ತನ್ನ ನಾಲ್ಕು ಕಾಲುಗಳಿಂದಲೂ ಜೋಲೆಯಂತೆ ನೇತುಬಿದ್ದು ನಿದ್ದೆ ಮಾಡುತ್ತದೆ. ಕೆಲವೊಮ್ಮೆ ರೆಂಬೆಗೆ ಸುತ್ತುವರಿದು ನಿದ್ದೆ ಮಾಡಬಹುದು.

	ಕೊಲೂಗೊವಿನಲ್ಲಿ ಸಂತಾನೋತ್ಪತ್ತಿ ಬಲು ನಿಧಾನ. ವರ್ಷಕ್ಕೊಂದು ಮರಿ ಹುಟ್ಟುತ್ತದೆ. ಯಾವ ಬಗೆಯ ಗೂಡನ್ನಾಗಲಿ ನೆಲೆಯನ್ನಾಗಲಿ ನಿರ್ಮಿಸಿಕೊಳ್ಳದಿರುವುದರಿಂದ ತಾಯಿ ತಾನು ಹೋದಲ್ಲೆಲ್ಲ ಮರಿಯನ್ನು ಹೊತ್ತುಕೊಂಡು ತಿರುಗುತ್ತದೆ. ತಾಯಿ ರೆಂಬೆಯಿಂದ ರೆಂಬೆಗೆ ಹಾರುವಾಗಲೂ ಮರಿ ತನ್ನ ಉಗುರುಗಳಿಂದ ತಾಯ ಉದರ ಭಾಗವನ್ನೂ ಬಾಯಿಯಿಂದ ಮೊಲೆಯನ್ನೂ ಕಚ್ಚಿಕೊಂಡಿರುತ್ತದೆ.

ಕೊಲೂಗೊವಿಗೂ ಲೀಮರ್ ಪ್ರಾಣಿಗಳಿಗೂ ಮತ್ತು ಕೀಟಭಕ್ಷಕ ಪ್ರಾಣಿಗಳಿಗೂ (ಇನ್ಸೆಕ್ಟಿವೊರ) ಹೊರನೋಟದಲ್ಲಿ ಸಾದೃಶ್ಯಗಳಿರುವುದರಿಂದ ಕೊಲೂಗೊವನ್ನು ಹಿಂದೆ ಲೀಮರ್‍ಗಳ ಗುಂಪಿಗೆ ಇಲ್ಲವೆ ಇನ್ಸೆಕ್ಟಿವೊರ ಗುಂಪಿಗೆ ಸೇರಿಸಲಾಗಿತ್ತು. ಆದರೆ ವಿಶದವಾದ ಅಭ್ಯಾಸದ ಫಲವಾಗಿ ಕೊಲೂಗೊ ಇವೆರಡರಿಂದಲೂ ಭಿನ್ನವಾಗಿದೆ ಎಂದು ಕಂಡುಬಂದು ಇದನ್ನು ಪ್ರತ್ಯೇಕವಾಗಿ ಡರ್ಮಾಪ್ಟರ ಗಣಕ್ಕೆ ಸೇರಿಸಲಾಯಿತು.
ಮಲಯ, ಫಿಲಿಪೀನ್ಸ್‍ಗಳ ಮೂಲನಿವಾಸಿಗಳು ಕೊಲೂಗೊವಿನ ಮಾಂಸವನ್ನು ತಿನ್ನುತ್ತಾರೆ. ಅಲ್ಲದೆ ಇದರ ಮೃದುವಾದ ಕೂದಲಿನಿಂದ ಟೋಪಿಗಳನ್ನು ತಯಾರಿಸುವುದುಂಟು. 							 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ